ಸಾಮವೇದ
	ನಾಲ್ಕು ವೇದಗಳಲ್ಲಿ ಮೂರನೆಯದು. ಇದರಲ್ಲಿ 1000 ಶಾಖೆಗಳಿರುವುದೆಂದು ಪತಂಜಲಿಯ ಮಹಾಭಾಷ್ಯದಲ್ಲಿ ಹೇಳಿರುವುದರಿಂದ ಆತನ ಕಾಲದಲ್ಲಿ ಸಾಮವೇದದ ಅನೇಕ ಸಂಹಿತೆಗಳು ಪ್ರಚಾರವಾಗಿದ್ದಿರಬೇಕು. ಈಗ ಸಾಮವೇದದ ಒಂದು ಸಂಹಿತೆ ಪ್ರಚಾರದಲ್ಲಿದೆ. ಇದು ಕೌಥುಮಶಾಖೆಗೆ ಸೇರಿದ್ದು. ಇದರಲ್ಲಿ ಪೂರ್ವಾರ್ಚಿಕ, ಉತ್ತರಾರ್ಚಿಕ ಎಂಬ ಎರಡು ಭಾಗಗಳಿವೆ. ಪೂರ್ವಾರ್ಚಿಕಕ್ಕೆ ಛಾಂದಸಿಕ ಎಂದೂ ಹೆಸರು. ಇದರಲ್ಲಿ ನಾಲ್ಕು ಪರ್ವಗಳಿವೆ : 1. ಆಗ್ನೇಯಪರ್ವ-116 ಋಕ್ಕುಗಳು, 2. ಐಂದ್ರಪರ್ವ-352 ಋಕ್ಕುಗಳು, 3. ಪಾವಮಾನ ಪರ್ವ-119 ಋಕ್ಕುಗಳು, 4. ಆರಣಪರ್ವ-55 ಋಕ್ಕುಗಳು. ಹೀಗೆ ಪೂರ್ವಾಚಿಕದಲ್ಲಿ 642 ಋಕ್ಕುಗಳಿವೆ. ಈ ಋಕ್ಕುಗಳಿಗೆ ಪ್ರಕೃತಿಋಕ್ ಎಂದು ಹೆಸರು. ಪೂರ್ವಾರ್ಚಿಕವನ್ನು ಆರು ಪ್ರಪಾಠಗಳನ್ನಾಗಿಯೂ ವಿಭಾಗ ಮಾಡಲಾಗಿದೆ. ಇವುಗಳಲ್ಲಿ 13 ಅರ್ಧಪ್ರಪಾಠಕಗಳಿವೆ. ಉತ್ತರಾರ್ಚಿಕದಲ್ಲಿ 9 ಪ್ರಪಾಠಗಳು. ಇವುಗಳಲ್ಲಿ 22 ಅರ್ಧ ಪ್ರಪಾಠಗಳೂ 1225 ಮಂತ್ರಗಳೂ ಇವೆ. 

	ಸಾಮವೇದ ಸಂಹಿತೆಯ ಪೂರ್ವಾರ್ಚಿಕ ಮತ್ತು ಉತ್ತರಾರ್ಚಿಕಗಳಲ್ಲಿರುವ 1810 ಋಕ್ಕುಗಳಲ್ಲಿ 261 ಋಕ್ಕುಗಳು ಪುನಃ ಪಠಿತವಾದ ಋಕ್ಕುಗಳು. ಇವುಗಳನ್ನು ಕಳೆದರೆ ಸಾಮಸಂಹಿತೆಯಲ್ಲಿ ಇರುವ ಋಕ್ಕುಗಳ ಸಂಖ್ಯೆ 1549 ಎಂದು ಗಣಿಸಲ್ಪಟ್ಟಿದೆ. ಇವುಗಳಲ್ಲಿ 75 ಬಿಟ್ಟು ಉಳಿದ ಋಕ್ಕುಗಳೆಲ್ಲವೂ ಈಗ ಪ್ರಚಾರದಲ್ಲಿರುವ (ಶಾಖಲ ಶಾಖೆ) ಋಕ್ಸಂಹಿತೆಯಲ್ಲಿ ಪಠಿತವಾಗಿರುವುವು. ಈ 75 ಋಕ್ಕುಗಳೂ ಋಗ್ವೇದದ ಇತರ (ಎಂದರೆ ಈಗ ನಮಗೆ ದೊರೆತಿಲ್ಲದ) ಸಂಹಿತೆಗಳಲ್ಲಿ ಇದ್ದವೆಂದು ಊಹಿಸುವುದಕ್ಕೆ ಅವಕಾಶವಿದೆ. ಋಕ್ಕುಗಳ ಪಾಠದಲ್ಲಿ ಋಕ್ಸಂಹಿತೆಯ ಪಾಠಕ್ಕೂ ಸಾಮಸಂಹಿತೆಯ ಪಾಠಕ್ಕೂ ಅನೇಕ ಎಡೆಗಳಲ್ಲಿ ಭೇದವಿದೆ. ಇಂತಹ ಸಂದರ್ಭಗಳಲ್ಲಿ ಋಕ್ಸಂಹಿತೆಯ ಪಾಠವೇ ಮೇಲೆಂದೂ ಸಾಮಸಂಹಿತೆಯ ಪಾಠಗಳು ನಿಕೃಷ್ಟವೆಂದೂ ಅನೇಕ ಪಂಡಿತರ ಅಭಿಪ್ರಾಯ. 

	ಸಾಮ ಎಂದರೆ ಏಳು ಸ್ವರಗಳಲ್ಲಿ ಗಾನ ಮಾಡಲ್ಪಟ್ಟ ಮಂತ್ರ ಎಂದರ್ಥ(ಗಾನವಿಲ್ಲದ ಮಂತ್ರಗಳು ನಾಲ್ಕು ಸ್ವರಗಳಲ್ಲಿ ಅಥವಾ ಒಂದೇ ಸ್ವರದಲ್ಲಿ ಹೇಳಲ್ಪಡುವುವು). ಮೇಲೆ ಹೇಳಿದಂತೆ ಪೂರ್ವಾರ್ಚಿಕ ಮತ್ತು ಉತ್ತರಾರ್ಚಿಕ ಎಂಬ 2 ಭಾಗಗಳ ಬದಲು ಗ್ರಾಮಗಾನ, ಅರಣ್ಯಗಾನ, ಊಹಗಾನ, ಊಹ್ಯಗಾನ, ಪೂರ್ವಾರ್ಚಿಕ ಎಂಬ ಭಾಗಗಳನ್ನೊಳಗೊಂಡ ಸಾಮಸಂಹಿತೆ ಸತ್ಯವ್ರತ ನಾಮಶ್ರಮಿಗಳಿಂದ ಪ್ರಕಾಶಿಸಲ್ಪಟ್ಟಿದೆ. 

	ಗ್ರಾಮಗಾನದಲ್ಲಿ ಪೂರ್ವ ಉತ್ತರ ಎಂಬ ಭಾಗಗಳುಳ್ಳ 17 ಪ್ರಪಾಠಗಳಿವೆ. ಅರಣ್ಯ ಗಾನದಲ್ಲಿ ಎರಡೆರಡು ಭಾಗಗಳುಳ್ಳ ಆರು ಪ್ರಪಾಠಗಳಿವೆ. ಈ ಅರಣ್ಯ ಗಾನದಲ್ಲಿ ಅರ್ಕಪರ್ವ, ದ್ವಂದ್ವಪರ್ವ, ವ್ರತಪರ್ವ, ಶುಕ್ರಿಯ ಪರ್ವ ಎಂಬ ನಾಲ್ಕು ಪರ್ವಗಳೂ ಮಹಾನಾಮ್ನೀ ಋಕ್ಕುಗಳೂ ಇವೆ. ಊಹಗಾನದಲ್ಲಿ ದಶರಾತ್ರ, ಸಂವತ್ಸರ, ಏಕಾಹ, ಅಹೀನ, ಸತ್ತ್ರ, ಪ್ರಾಯಶ್ಚಿತ್ತ, ಕ್ಷುದ್ರ ಎಂಬ ಏಳು ಪರ್ವಗಳಿವೆ; ಇದರಲ್ಲಿ ಎರಡೆರಡು ಭಾಗಗಳುಳ್ಳ 23 ಪ್ರಪಾಠಕಗಳೂ ಇವೆ. ಊಹ್ಯಗಾನದಲ್ಲಿಯೂ ದಶರಾತ್ರ ಮೊದಲಾದ ಏಳು ಪರ್ವಗಳಿವೆ; ಇದರಲ್ಲಿ ಎರಡೆರಡು ಭಾಗಗಳುಳ್ಳ 23 ಪ್ರಪಾಠಗಳಿವೆ. 

	ಪೂರ್ವಾರ್ಚಿಕರಲ್ಲಿ 6 ಪ್ರಪಾಠಗಳಿದ್ದು ಈ ಪ್ರಪಾಠಕಗಳಲ್ಲಿನ ಪ್ರಕೃತಿ ಋಕ್ಕುಗಳೇ ಗ್ರಾಮಗೇಯಗಾನಕ್ಕೆ ಆಧಾರ. ಹಾಗೆಯೇ ಉತ್ತರಾರ್ಚಿಕದಲ್ಲಿನ 9 ಪ್ರಪಾಠಗಳಲ್ಲಿರುವ ಋಕ್ಕುಗಳೇ ಊಹೆಗಾನಕ್ಕೆ ಆಧಾರ. ಒಂದೊಂದು ಋಕ್ಕಿನ ಆಧಾರದ ಮೇಲೆ ಒಂದಕ್ಕಿಂತ ಹೆಚ್ಚು ವಿಧದಲ್ಲಿ ಸಾಮಗಳು ಗಾನಮಾಡಲ್ಪಡಬಹುದು. ಆದ್ದರಿಂದ ಸಂಹಿತೆಯ ಪೂರ್ವ ಮತ್ತು ಉತ್ತರ ಆರ್ಚಿಕಗಳಲ್ಲಿರುವ ಋಕ್ಕುಗಳ ಸಂಖ್ಯೆ 1810. ಆದಾಗ್ಯೂ ಇವುಗಳ ಆಧಾರದ ಮೇಲೆ ಗಾನಮಾಡಲ್ಪಡುವ ಸಾಮಗಳ ಸಂಖ್ಯೆ 8000ಕ್ಕಿಂತ ಅಧಿಕವಾಗಿರುವುದು. ಇವುಗಳಲ್ಲಿ ರಥಂಕ, ಬೃಹತ್ ಮತ್ತು ವಾಮದೇವ್ಯ ಎಂಬ ಮೂರು ಪ್ರಸಿದ್ಧ ಸಾಮಗಳೂ ಒಳಪಟ್ಟಿವೆ. 

	ಸಾಮಗಳನ್ನು ಗಾನಮಾಡುವಾಗ ಹಾ ಇ, ಓಹಾಇ ಎಂದು ಮೊದಲಾದ ಅಕ್ಷರಗಳನ್ನು ಮಧ್ಯದಲ್ಲಿ ಸೇರಿಸಿಕೊಂಡು ಗಾನಮಾಡುತ್ತಾರೆ. ಇವುಗಳಿಗೆ ಸ್ತೋಭವೆಂದು ಹೆಸರು. ಜೈಮಿನೀಯ ಶಾಖೆಯ ಸಂಹಿತೆಯ ಪಾಠವೂ ದೊರೆತಿದ್ದು ಈತ ಮುದ್ರಿತವಾಗಿದೆ. ಪ್ರಕೃತಿ ಋಕ್ಕುಗಳ ಸಂಖ್ಯೆಯಲ್ಲಿಯೂ ಸಾಮಗಳ ಸಂಖ್ಯೆಯಲ್ಲಿಯೂ ಈ ಶಾಖೆಗೂ ಕೌಥುಮ ಶಾಖೆಗೂ ವ್ಯತ್ಯಾಸಗಳಿವೆ. 

	ತಾಂಡ್ಯ ಅಥವಾ ಪಂಚವಿಂಶ ಬ್ರಾಹ್ಮಣ, ಷಡ್ವಿಂಶಬ್ರಾಹ್ಮಣ, ಮಂತ್ರ ಬ್ರಾಹ್ಮಣ, ದೈವಬ್ರಾಹ್ಮಣ, ಆರ್ಷೇಯಬ್ರಾಹ್ಮಣ, ಸಾಮವಿಧಾನ ಬ್ರಾಹ್ಮಣ, ಜೈಮಿನೀಯ ಬ್ರಾಹ್ಮಣ ಎಂಬ ಸಾಮವೇದಕ್ಕೆ ಸೇರಿದ ಏಳು ಬ್ರಾಹ್ಮಣಗಳು ಈಗ ಪ್ರಚಾರದಲ್ಲಿವೆ. ದಶೋಪನಿಷತ್ತುಗಳಲ್ಲಿ ಒಳಪಟ್ಟ ಛಾಂದೋಗ್ಯ ಮತ್ತು ಕೇನೋಪನಿಷತ್ತುಗಳೂ ಸಾಮವೇದಕ್ಕೆ ಸೇರಿದವುಗಳು. 

	ಸಾಮಸಂಹಿತೆ ಯುಜುಃಸಂಹಿತೆಗಳಂತೆ ಯಜ್ಞಕರ್ಮಗಳ ಉದ್ದೇಶ ಕ್ಕಾಗಿಯೇ ಸಂಕಲನ ಮಾಡಲ್ಪಟ್ಟಿರುವ ಮಂತ್ರಗಳ ಸಮೂಹವಾಗಿದೆ. ಋಕ್ಸಂಹಿತೆ, ಅಥರ್ವ ಸಂಹಿತೆಗಳು ಈ ಉದ್ದೇಶಕ್ಕಾಗಿ ಸಂಕಲನ ಮಾಡಿದ ಮಂತ್ರರಾಶಿಗಳು.
	
	(ಎ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ